ಯುರೇನಸ್
Uranus, as seen by Voyager 2 | |||||||
---|---|---|---|---|---|---|---|
ಆವಿಷ್ಕಾರ | |||||||
ಆವಿಷ್ಕಾರಕ | ವಿಲಿಯಂ ಹರ್ಷೆಲ್ | ||||||
ಆವಿಷ್ಕಾರದ ದಿನಾಂಕ | ಮಾರ್ಚ್ ೧೩, ೧೭೮೧ | ||||||
ಕಕ್ಷೆಯ ಗುಣಗಳು | |||||||
ದೀರ್ಘಾರ್ಧ ಅಕ್ಷ | ೨,೮೭೦,೯೭೨,೨೨೦ ಕಿ.ಮೀ. ೧೯.೧೯೧ ೨೬೩ ೯೩ AU | ||||||
ಕಕ್ಷೆಯ ಪರಿಧಿ | ೧೮.೦೨೯ ಶತಕೋಟಿ ಕಿ.ಮೀ ೧೨೦.೫೧೫ AU | ||||||
ಕಕ್ಷೀಯ ಕೇಂದ್ರ ಚ್ಯುತಿ | ೦.೦೪೭ ೧೬೭ ೭೧ | ||||||
ಸೂರ್ಯನಿಂದ ಕನಿಷ್ಠ ದೂರ | ೨,೭೩೫,೫೫೫,೦೩೫ ಕಿ.ಮೀ. ೧೮.೨೮೬ ೦೫೫ ೯೬ AU | ||||||
ಸೂರ್ಯನಿಂದ ಕನಿಷ್ಠ ದೂರ | ೩,೦೦೬,೩೮೯,೪೦೫ ಕಿ.ಮೀ. ೨೦.೦೯೬ ೪೭೧ ೯೦ AU | ||||||
ಕಕ್ಷೀಯ ಪರಿಭ್ರಮಣ ಕಾಲ | ೩೦,೭೦೭.೪೮೯೬ ದಿನ (೮೪.೦೭ a) | ||||||
en:Synodic period | ೩೬೯.೬೫ ದಿನ | ||||||
ಸರಾಸರಿ ಕಕ್ಷಾ ವೇಗ | ೬.೭೯೫ ಕಿ.ಮೀ./ಪ್ರತಿ ಕ್ಷಣ | ||||||
ಗರಿಷ್ಠ ಕಕ್ಷಾ ವೇಗ | ೭.೧೨೮ ಕಿ.ಮೀ./ಪ್ರತಿ ಕ್ಷಣ | ||||||
ಕನಿಷ್ಠ ಕಕ್ಷಾ ವೇಗ | ೬.೪೮೬ ಕಿ.ಮೀ./ಪ್ರತಿ ಕ್ಷಣ | ||||||
ಓರೆ | ೦.೭೬೯ ೮೬° (ಸೂರ್ಯನ ಸಮಭಾಜಕ ರೇಖೆಗೆ ೬.೪೮°) | ||||||
Longitude of the ascending node |
೭೪.೨೨೯ ೮೮° | ||||||
Argument of the perihelion |
೯೬.೭೩೪ ೩೬° | ||||||
ನೈಸರ್ಗಿಕ ಉಪಗ್ರಹಗಳ ಸಂಖ್ಯೆ | ೨೭ | ||||||
ಭೌತಿಕ ಗುಣಲಕ್ಷಣಗಳು | |||||||
ಸಮಭಾಜಕ ರೇಖೆಯ ವ್ಯಾಸ | ೫೧,೧೧೮ ಕಿ.ಮೀ. (ಭೂಮಿಯ ೪೦೦.೭%) | ||||||
ಧ್ರುವಗಳ ಮೂಲಕ ವ್ಯಾಸ | ೪೯,೯೪೬ ಕಿ.ಮೀ. (ಭೂಮಿಯ ೩೯೨.೯%) | ||||||
Oblateness | ೦.೦೨೨೯ | ||||||
ಮೇಲ್ಮೈ ವಿಸ್ತೀರ್ಣ | ೮.೦೮೪×೧೦೯ ಕಿ.ಮೀ.೨ (ಭೂಮಿಯ ೧೫೮೪.೯%) | ||||||
ಗಾತ್ರ | ೬.೮೩೪×೧೦೧೩ ಕಿ.ಮೀ.೩ (ಭೂಮಿಯ ೬೩೦೮.೬%) | ||||||
ದ್ರವ್ಯರಾಶಿ | ೮.೬೮೩೨×೧೦೨೫ kg (ಭೂಮಿಯ ೧೪೫೩.೬%) | ||||||
ಸರಾಸರಿ ಸಾಂದ್ರತೆ | ೧.೩೧೮ ಗ್ರಾಂ./ಸೆಂ.ಮೀ.೩ | ||||||
ಸಮಭಾಜಕದ ಬಳಿ ಗುರುತ್ವ | ೮.೬೯ m/s೨ (೦.೮೮೬ g) | ||||||
ಮುಕ್ತಿ ವೇಗ | ೨೧.೨೯ ಕಿ.ಮೀ./ಪ್ರತಿ ಕ್ಷಣ | ||||||
ಅಕ್ಷೀಯ ಪರಿಭ್ರಮಣ ಕಾಲ | −೦.೭೧೮ ೩೩ ದಿನ (೧೭ ಘಂ ೧೪ ನಿ ೨೪ ಕ್ಷ) ೧ | ||||||
ಅಕ್ಷೀಯ ಪರಿಭ್ರಮಣ ವೇಗ | ೨.೫೯ ಕಿ.ಮೀ./ಪ್ರತಿ ಕ್ಷಣ = ೯೩೨೦ ಕಿ.ಮೀ./ಘಂ. (ಸಮಭಾಜಕದಲ್ಲಿ) | ||||||
ಅಕ್ಷದ ಓರೆ | ೯೭.೭೭° | ||||||
Right ascension of North pole |
೭೭.೩೧° (೫ h ೯ min ೧೫ s) | ||||||
Declination | +೧೫.೧೭೫° | ||||||
ಪ್ರತಿಫಲನಾಂಶ | ೦.೫೧ | ||||||
ಮೋಡ ಪದರದ ಸರಾಸರಿ ತಾಪಮಾನ | ೫೫ ಕೆ. | ||||||
ಮೇಲ್ಮೈ ತಾಪಮಾನ |
| ||||||
Adjective | Uranian | ||||||
ವಾಯುಮಂಡಲದ ಗುಣಲಕ್ಷಣಗಳು | |||||||
ವಾತಾವರಣದ ಒತ್ತಡ | ೧೨೦ kPa (ಮೋಡದ ಎತ್ತರದಲ್ಲಿ) | ||||||
ಜಲಜನಕ | ೮೩% | ||||||
ಹೀಲಿಯಂ | ೧೫% | ||||||
Methane | ೧.೯೯% | ||||||
Ammonia | ೦.೦೧% | ||||||
Ethane | ೦.೦೦೦೨೫% | ||||||
Acetylene | ೦.೦೦೦೦೧% | ||||||
ಇಂಗಾಲದ ಮಾನಾಕ್ಸೈಡ್ Hydrogen sulfide |
trace | ||||||
ಯುರೇನಸ್ - ಸೂರ್ಯನಿಂದ ೭ನೇ ಗ್ರಹ. ಅನಿಲರೂಪಿಯಾದ ಯುರೇನಸ್ ಗ್ರಹವು ವ್ಯಾಸದಲ್ಲಿ ೩ನೇ ಅತಿದೊಡ್ಡ ಹಾಗೂ ದ್ರವ್ಯರಾಶಿಯಲ್ಲಿ ೪ನೇ ಅತಿದೊಡ್ಡ ಗ್ರಹವಾಗಿದೆ. ಇದಕ್ಕೆ ಆಕಾಶದ ದೇವತೆ ಹಾಗೂ ಇತರ ದೇವತೆಗಳ ಪೂರ್ವಜನಾದ ಗ್ರೀಕ್ ದೇವತೆ ಯುರೇನಸ್ನ ಹೆಸರಿಡಲಾಗಿದೆ.
ಯುರೇನಸ್ ಗ್ರಹವನ್ನು ಸಮೀಪಿಸಿದ ಏಕಮಾತ್ರ ಗಗನನೌಕೆಯೆಂದರೆ ನಾಸಾ ೧೯೮೬ರಲ್ಲಿ ಉಡಾಯಿಸಿದ ವಾಯೇಜರ್ ೨ . ನೆಪ್ಚೂನ್ಗೆ ಹೋಗುವ ಮಾರ್ಗಮಧ್ಯದಲ್ಲಿ ವಾಯೇಜರ್ ನೌಕೆಯು ಜನವರಿ ೨೪, ೧೯೮೬ರಂದು ಯುರೇನಸ್‌ನ ಸಮೀಪ ಹಾದುಹೋಯಿತು. ಸಧ್ಯಕ್ಕೆ ಯುರೇನಸ್‌ನತ್ತ ಹೋಗುವ ಇನ್ನಾವ ಯಾತ್ರೆಗಳೂ ಯೋಜನೆಯಲ್ಲಿಲ್ಲ.
ಆಧುನಿಕ ಕಾಲಗಳಲ್ಲಿ ಕಂಡುಹಿಡಿಯಲಾದ ಮೊದಲ ಗ್ರಹ ಯುರೇನಸ್. ವಿಲಿಯಮ್ ಹರ್ಷೆಲ್ನು ಮಾರ್ಚ್ ೩೧, ೧೭೮೧ ರಂದು ಈ ಗ್ರಹವನ್ನು ಔಪಚಾರಿಕವಾಗಿ ಕಂಡುಹಿಡಿದನು; ಬೇರೆ ಗ್ರಹಗಳು (ಬುಧದಿಂದ ಶನಿಯವರೆಗೆ) ಹಿಂದಿನ ಕಾಲದಿಂದಲೇ ಪರಿಚಿತವಾಗಿದ್ದುದರಿಂದ, ಯುರೇನಸ್‌ನ ಆವಿಷ್ಕಾರವು ಆಧುನಿಕ ಮಾನವ ಇತಿಹಾಸದಲ್ಲಿ ಮೊದಲಬಾರಿಗೆ ಸೌರಮಂಡಲದ ಎಲ್ಲೆಯನ್ನು ವಿಸ್ತರಿಸಿತು. ಬರಿಗಣ್ಣಿನಿಂದಲ್ಲದೆ ದೂರದರ್ಶಕವನ್ನುಪಯೋಗಿಸಿ (telescope) ಕಂಡುಹಿಡಿಯಲಾದ ಮೊಟ್ಟಮೊದಲ ಗ್ರಹ ಯುರೇನಸ್.
ಆವಿಷ್ಕಾರ
[ಬದಲಾಯಿಸಿ]ಪ್ರಾಚೀನ ಕಾಲಗಳಲ್ಲಿ ಅಪರಿಚಿತವಾಗಿ ಆಧುನಿಕ ಕಾಲದಲ್ಲಿ ಕಂಡುಹಿಡಿಯಲಾದ ಮೊದಲ ಗ್ರಹ ಯುರೇನಸ್; ಇದನ್ನು ಮುಂಚೆ ಹಲವು ಬಾರಿ ವೀಕ್ಷಿಸಲಾಗಿದ್ದರೂ, ಇದನ್ನು ತಪ್ಪಾಗಿ ನಕ್ಷತ್ರವೆಂದು ಭಾವಿಸಲಾಗಿತ್ತು. ಗ್ರಹದ ಮೊದಲ ದಾಖಲಿತ ವೀಕ್ಷಣೆಯು ೧೬೯೦ರಲ್ಲಾಯಿತು. ಆ ವರ್ಷದಲ್ಲಿ ಜಾನ್ ಫ್ಲಮ್ಸ್ಟೀಡ್ನು ಯುರೇನಸ್ ಗ್ರಹವನ್ನು ಟೌರಿ ಎಂದು ದಾಖಲಿಸಿಕೊಂಡನು. ಇದರ ನಂತರ ಫ್ಲಮ್ಸ್ಟೀಡ್‌ನು ಯುರೇನಸ್‌ನ್ನು ಕಡೇಪಕ್ಷ ೬ ಬಾರಿ ವೀಕ್ಷಿಸಿದನು. ಅತಿ ಹೆಚ್ಚು ಬಾರಿ ವೀಕ್ಷಣೆಯ ದಾಖಲೆಯು ಯುರೇನಸ್ ನ್ನು ೧೭೫೦ ಮತ್ತು ೧೭೭೧ರ ನಡುವೆ ೧೨ ಬಾರಿ ವೀಕ್ಷಿಸಿದ ಫ್ರೆಂಚ್ ಖಗೋಳಶಾಸ್ತ್ರಜ್ಞನಾದ ಪೀರೀ ಲೆಮೋನಿಯರ್ಗೆ ಸೇರುತ್ತದೆ.
ಹರ್ಷೆಲ್ ನು ಗ್ರಹವನ್ನು ಮಾರ್ಚ್ ೧೩, ೧೭೮೧ರಲ್ಲಿ ಕಂಡುಹಿಡಿದರೂ, ಏಪ್ರಿಲ್ ೨೬, ೧೭೮೧ರಂದು ಅದನ್ನು ಒಂದು ಧೂಮಕೇತು ಎಂದು ವರದಿ ಸಲ್ಲಿಸಿದನು.
ಮಾರ್ಚ್ ೧೩, ೧೭೮೧ರ ರಾತ್ರಿಯಂದು, ಏಳು-ಅಡಿ ಉದ್ದದ ಮತ್ತು ೨೨೭ ಪಟ್ಟು ದೃಷ್ಟಿವರ್ಧನೆಯನ್ನು ಹೊಂದಿದ್ದ ದೂರದರ್ಶಕವನ್ನುಪಯೋಗಿಸಿ ಹರ್ಷೆಲ್ ನು "H Geminorum"ನ ಸಮೀಪದಲ್ಲಿ ಸಣ್ಣ ನಕ್ಷತ್ರಗಳನ್ನು ಪರಿಶೀಲಿಸುತ್ತಿದ್ದನು. ಹೀಗೆ ಪರಿಶೀಲಿಸುವಾಗ ಈ ನಕ್ಷತ್ರಗಳಲ್ಲೊಂದು ಅಸಾಮಾನ್ಯವಾದ ವ್ಯಾಸವನ್ನು ಹೊಂದಿರುವಂತೆ ಕಂಡಿತು. ಈ ಕಾರಣದಿಂದ, ಆ ನಕ್ಷತ್ರವನ್ನು ಧೂಮಕೇತುವೆಂದು ಪರಿಗಣಿಸಿ, ಲಂಡನ್ನ ರಾಯಲ್ ಸೊಸೈಟಿಯಲ್ಲಿ ಚರ್ಚಿಸಲಾಯಿತು. ಆದರೆ, ಇದರ ನಂತರ, ಯುರೇನಸ್‌ನ ಕಕ್ಷೆಯು ಸುಮಾರು ವೃತ್ತಕಾರದಲ್ಲಿ ಇದೆಯೆಂದು ಹರ್ಷೆಲ್ ಮತ್ತು ಲ್ಯಾಪ್ಲೇಸ್ ರ ಸಂಶೋಧನೆಗಳು ಸಾಧಿಸಿದ್ದರಿಂದ, ಯುರೇನಸ್‌ನ್ನು ಗ್ರಹವೆಂದು ಘೋಷಿಸಲಾಯಿತು.[೧]
ಚೈನಾ, ಜಪಾನ್, ಕೊರಿಯಾ, ಮತ್ತು ವಿಯೆತ್ನಾಮೀಯರ ಭಾಷೆಗಳಲ್ಲಿ, ಗ್ರಹದ ಹೆಸರು ಪದಶಃ ಆಗಸದ ರಾಜ ನಕ್ಷತ್ರವೆಂದು ಅನುವಾದವಾಗುತ್ತದೆ.[೨] ಭಾರತದಲ್ಲಿ ಹಿಂದೂ ಪುರಾಣಗಳ ಸೂರ್ಯ ದೇವನ ಸಾರಥಿಯಾದ ಅರುಣನ ಹೆಸರನ್ನು ಈ ಗ್ರಹಕ್ಕೆ ಇಡಲಾಗಿದೆ.
ಭೌತಿಕ ಗುಣಲಕ್ಷಣಗಳು
[ಬದಲಾಯಿಸಿ]ರಚನೆ
[ಬದಲಾಯಿಸಿ]ಯುರೇನಸ್ ಮುಖ್ಯವಾಗಿ ಅನಿಲ ಮತ್ತು ವಿವಿಧ ಹಿಮಗಳಿಂದ ಕೂಡಿದೆ. ವಾಯುಮಂಡಲವು ೮೩% ಜಲಜನಕ, ೧೫% ಹೀಲಿಯಂ, ೨% ಮೀಥೇನ್, ಮತ್ತು ಸ್ವಲ್ಪ ಅಸಿಟಲೀನ್ಗಳನ್ನು ಹೊಂದಿದೆ. ಒಳಭಾಗವು ಆಮ್ಲಜನಕ, ಇಂಗಾಲ, ಸಾರಜನಕ, ಮತ್ತು ಶಿಲೆಗಳಂಥ ಭಾರವಾದ ವಸ್ತುಗಳಿಂದ ಹೆಚ್ಚು ಸಮೃದ್ಧವಾಗಿದೆ. ಹೋಲಿಕೆಯಲ್ಲಿ, ಗುರು ಮತ್ತು ಶನಿ ಗ್ರಹಗಳು ಬಹುತೇಕ ಜಲಜನಕ ಮತ್ತು ಹೀಲಿಯಂಗಳಿಂದ ರಚಿತವಾಗಿವೆ. ನೆಪ್ಚೂನ್ನಂತೆ ಯುರೇನಸ್ ಗ್ರಹವು ಗುರು ಮತ್ತು ಶನಿಗಳ ಒಳಭಾಗಗಳನ್ನು ಹೋಲುತ್ತದೆ. ಆದರೆ, ಯುರೇನಸ್ ನಲ್ಲಿ ಭಾರಿ ಪ್ರಮಾಣದ ಲೋಹರೂಪಿ ಜಲಜನಕವು ಕಂಡುಬರುವುದಿಲ್ಲ. ವಾಯುಮಂಡಲದಲ್ಲಿರುವ ಮೀಥೇನ್ ಅನಿಲವು ಕೆಂಪು ಬೆಳಕನ್ನು ಹೀರಿಕೊಳ್ಳುವುದರಿಂದ, ಗ್ರಹವು ನೀಲಿ-ಹಳದಿ ಬಣ್ಣದಲ್ಲಿ ಕಾಣುತ್ತದೆ. ಯುರೇನಸ್‌ನ ಮೋಡದ ಪದರದ ತಾಪಮಾನವು ಸುಮಾರು ೫೫ ಕೆ. (೨೧೮ ಸೆ. ಅಥವಾ ೩೬೦ ಫ್ಯಾರನ್ಹೀಟ್)ನಷ್ಟು ಇರುತ್ತದೆ.[೩]
ಅಕ್ಷೀಯ ಓರೆ
[ಬದಲಾಯಿಸಿ]ಯುರೇನಸ್‌ನ ಒಂದು ಅಸಾಮಾನ್ಯವಾದ ವೈಶಿಷ್ಟ್ಯವೆಂದರೆ ಅದರ ೯೮ ಡಿಗ್ರಿಗಳ ಅಕ್ಷೀಯ ಓರೆ. ಇದರ ಪರಿಣಾಮವಾಗಿ, ಯುರೇನಸ್‌ನ ಕಕ್ಷೆಯ ಒಂದು ಭಾಗದಲ್ಲಿ ಅದರ ಒಂದು ಧ್ರುವವು ಸೂರ್ಯನತ್ತ ಮುಖ ಮಾಡಿ, ಇನ್ನೊಂದು ಧ್ರುವವು ಕತ್ತಲಲ್ಲಿರುತ್ತದೆ. ಕಕ್ಷೆಯ ಎದುರು ಭಾಗದಲ್ಲಿ ಧ್ರುವಗಳ ಸ್ಥಿತಿಗಳು ತಿರುಗುಮುರುಗಾಗುತ್ತವೆ. ಇದರಿಂದ ಪ್ರತಿ ಧ್ರುವವು ೪೨-ವರ್ಷಗಳ ಕಾಲ ಬೆಳಕಿನಲ್ಲಿ ಮತ್ತು ೪೨-ವರ್ಷಗಳ ಕಾಲ ಕತ್ತಲಲ್ಲಿ ಇರುತ್ತದೆ. ಈ ಎರಡು ವೈಪರೀತ್ಯಗಳ ನಡುವೆ ಸಮಭಾಜಕದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ.
೧೯೮೬ರಲ್ಲಿ ವಾಯೇಜರ್ ೨ ಹಾದುಹೋದ ಸಮಯದಲ್ಲಿ ಯುರೇನಸ್ನ ದಕ್ಷಿಣಧ್ರುವವು ಸೂರ್ಯನತ್ತ ನೇರವಾಗಿ ಮುಖ ಮಾಡಿತ್ತು. ಅಂತರರಾಷ್ಟ್ರೀಯ ಖಗೋಳಶಾಸ್ತ್ರ ಸಂಸ್ಥೆಯು ಪ್ರಸ್ತುತದಲ್ಲಿ ಅನುಮೋದಿಸಿರುವ ನಿರ್ದೇಶಾಂಕದ (coordinate) ಆಧಾರದ ಮೇಲೆ ಈ ಧ್ರುವವನ್ನು "ದಕ್ಷಿಣಧ್ರುವ"ವೆಂದು ಕರೆಯಲಾಗಿದೆ. ಇದರ ಪ್ರಕಾರ, ಗ್ರಹ/ಉಪಗ್ರಹವು ಯಾವುದೇ ದಿಕ್ಕಿನಲ್ಲಿ ಸುತ್ತುತ್ತಿದ್ದರೂ, ಸೌರಮಂಡಲದ ಸಮತಳದ ಮೇಲ್ದಿಕ್ಕಿಗೆ ತೋರಿಸುವ ಧ್ರುವವನ್ನು ಉತ್ತರಧ್ರುವವೆಂದು ಪರಿಗಣಿಸಲಾಗುತ್ತದೆ. ಇದೇ ರೀತಿ, ಸಮತಳದ ಕೆಳಕ್ಕೆ ಸೂಚಿಸುವ ಧ್ರುವವನ್ನು ದಕ್ಷಿಣಧ್ರುವವೆಂದು ಪರಿಗಣಿಸಲಾಗುತ್ತದೆ.[೧]Archived 2018-10-31 ವೇಬ್ಯಾಕ್ ಮೆಷಿನ್ ನಲ್ಲಿ. [೨]Archived 2011-09-10 ವೇಬ್ಯಾಕ್ ಮೆಷಿನ್ ನಲ್ಲಿ..
ಒಮ್ಮೊಮ್ಮೆ ಬೇರೊಂದು ನಿರ್ದೇಶಾಂಕವನ್ನು ಉಪಯೋಗಿಸಲಾಗುತ್ತದೆ. ಇದರ ಪ್ರಕಾರ, ಗ್ರಹವು ಸುತ್ತುವ ದಿಕ್ಕು ಮತ್ತು ಬಲಗೈ ನಿಯಮಗಳಿಂದ ಧ್ರುವಗಳು ನಿರ್ಧರಿಸಲ್ಪಡುತ್ತವೆ.[೩] Archived 2007-05-05 ವೇಬ್ಯಾಕ್ ಮೆಷಿನ್ ನಲ್ಲಿ.. ಈ ನಿರ್ದೇಶಾಂಕದದ ಪ್ರಕಾರ, ೧೯೮೬ರಲ್ಲಿ ಸೂರ್ಯನತ್ತ ಮುಖ ಮಾಡಿದ್ದ ಧ್ರುವವು ದಕ್ಷಿಣಧ್ರುವ. "Sky and Night" ನಿಯತಕಾಲಿಕೆಯ ಸೆಪ್ಟೆಂಬರ್ ೨೦೦೬ರ ಪ್ರತಿಯಲ್ಲಿ (ಪುಟ ೪೭) ಪ್ಯಾಟ್ರಿಕ್ ಮೂರ್ ಈ ವಿಷಯದ ಬಗ್ಗೆ ಹಾಸ್ಯಾಸ್ಪದವಾಗಿ "ಧ್ರುವದ ದಿಕ್ಕನ್ನು ನೀವೇ ಆರಿಸಿಕೊಳ್ಳಿ" ಎಂದು ಹೇಳುತ್ತಾರೆ.
ಧ್ರುವಗಳ ಈ ಸ್ಥಿತಿಗಳ ಒಂದು ಪರಿಣಾಮವೆಂದರೆ, ಯುರೇನಸ್‌ನ ಧ್ರುವಗಳು ಸಮಭಾಜಕ ವಲಯಕ್ಕಿಂತ ಹೆಚ್ಚು ಸೂರ್ಯಶಕ್ತಿಯನ್ನು ಪಡೆಯುತ್ತವೆ. ಆದರೂ, ಯುರೇನಸ್‌ನ ಸಮಭಾಜಕ ವಲಯವು ಧ್ರುವಗಳಿಗಿಂತ ಹೆಚ್ಚು ಬಿಸಿಯಾಗಿದೆ. ಇದರ ಕಾರಣ ಇನ್ನೂ ತಿಳಿದುಬಂದಿಲ್ಲ. ಯುರೇನಸ್‌ನ ವಿಪರೀತವಾದ ಅಕ್ಷೀಯ ಓರೆಗೂ ಕಾರಣವು ತಿಳಿದುಬಂದಿಲ್ಲ. ಸೌರಮಂಡಲದ ಉಗಮದ ಸಮಯದಲ್ಲಿ ಭೂಮಿಯಷ್ಟು ಗಾತ್ರದ ಒಂದು ಹೊಸ ಗ್ರಹವು ಯುರೇನಸ್ ನ ಮೇಲಪ್ಪಳಿಸಿ ಅದನ್ನು ಈ ರೀತಿ ತಿರುಗಿಸಿರಬಹುದೆಂದು ಶಂಕಿಸಲಾಗಿದೆ.
ಯುರೇನಸ್‌ನ ವಿಪರೀತವಾದ ಅಕ್ಷೀಯ ಓರೆಯು ಹವಾಮಾನದಲ್ಲೂ ವೈಪರೀತ್ಯಗಳನ್ನು ಉಂಟುಮಾಡುವಂತೆ ಕಂಡುಬರುತ್ತದೆ. ವಾಯೇಜರ್ ೨ ಹಾದುಹೋದಾಗ ಯುರೇನಸ್‌ನ ಪಟ್ಟಿಯಾಕಾರದ ಮೋಡ ವಿನ್ಯಾಸಗಳು ಬಹಳ ಮಂದವಾಗಿ ಮತ್ತು ಸೌಮ್ಯವಾಗಿದ್ದವು. ಆದರೆ, ಸೂರ್ಯವು ಯುರೇನಸ್‌ನ ಸಮಭಾಜಕವನ್ನು ಸಮೀಪಿಸುತ್ತಿರುವುದರಿಂದ, ಇತ್ತೀಚೆಗೆ ಹಬಲ್ ದೂರದರ್ಶಕವು ತೆಗೆದ ಚಿತ್ರಗಳು ಹೆಚ್ಚು ಗಾಢವಾದ ಪಟ್ಟಿಗಳನ್ನು ತೋರಿಸುತ್ತವೆ. ೨೦೦೭ರಷ್ಟು ಹೊತ್ತಿಗೆ ಸೂರ್ಯವು ನೇರವಾಗಿ ಯುರೇನಸ್‌ನ ಸಮಭಾಜಕದ ಮೇಲಿರುತ್ತದೆ.
ಕಾಂತಕ್ಷೇತ್ರ
[ಬದಲಾಯಿಸಿ]ಯುರೇನಸ್‌ನ ಕಾಂತಕ್ಷೇತ್ರವು ಪರಿಭ್ರಮಣದ ಅಕ್ಷೆಗೆ ಸುಮಾರು ೬೦ ಡಿಗ್ರಿಗಳ ಓರೆಯಲ್ಲಿದ್ದು, ಗ್ರಹದ ಕೇಂದ್ರದಿಂದ ಉದ್ಭವವಾಗದೆ ವಿಚಿತ್ರವಾಗಿದೆ. ಈ ಕಾಂತಕ್ಷೇತ್ರವು ಬಹುಶಃ ಗ್ರಹದ ಮೇಲ್ಪದರಗಳಲ್ಲಿ ಉಂಟಾಗುವ ಚಲನೆಯಿಂದ ಉದ್ವ್ಹವವಾಗಿದೆ. ನೆಪ್ಚೂನ್‌ನ ಕಾಂತಕ್ಷೇತ್ರವೂ ಅದರ ಕೇಂದ್ರದಿಂದ ಹುಟ್ಟಿಲ್ಲವಾದ್ದರಿಂದ, ಯುರೇನಸ್‌ನ ಕಾಂತಕ್ಷೇತ್ರವು ಅದರ ಅಕ್ಷೀಯ ಓರೆಯಲ್ಲದೆ ಬೇರಾವುದೋ ಕಾರಣದಿಂದ ಉಂಟಾಗಿದೆಯೆಂದು ನಾವು ಊಹಿಸಬಹುದು. ಕಾಂತೀಯಬಾಲವು (magnetotail) ಗ್ರಹದ ಪರಿಭ್ರಮಣೆಯ ಕಾರಣದಿಂದ, ಸುರುಳಿಯಾಕಾರದಲ್ಲಿ ಗ್ರಹದ ಹಿಂದೆ ತಿರುಗಿಕೊಂಡಿದೆ. ಕಾಂತಕ್ಷೇತ್ರದ ಮೂಲವಿನ್ನೂ ತಿಳಿದುಬಂದಿಲ್ಲ.
ಸೌಮ್ಯವಾದ ವಾಯುಮಂಡಲಕ್ಕೆ ಕಾರಣ
[ಬದಲಾಯಿಸಿ]ಯುರೇನಸ್‌ನ ಆಂತರಿಕ ಶಾಖವು ಗುರು ಮತ್ತು ಶನಿ ಗ್ರಹಗಳದ್ದಕ್ಕಿಂತ ಕಡಿಮೆ. ಗುರು ಮತ್ತು ಶನಿಗಳೆರಡೂ ಸೂರ್ಯನಿಂದ ಪಡೆಯುವುದಕ್ಕಿಂತ ಹೆಚ್ಚು ಶಾಖವನ್ನು ಹೊರಸೂಸುತ್ತವೆ. ಇದರಿಂದ ವಾಯುಮಂಡಲದಲ್ಲಿ ಪ್ರಬಲವಾದ ಸಂವಹನ ಪ್ರವಾಹಗಳು ಉಂಟಾಗುತ್ತವೆ. ಯುರೇನಸ್ ಈ ಎರಡು ಗ್ರಹಗಳಿಗಿಂತ ಕಡಿಮೆ ದ್ರವ್ಯರಾಶಿಯನ್ನು ಹೊಂದಿರುವುದರಿಂದ, ಅದರ ಶಾಖೋತ್ಪನ್ನವೂ ಕಡಿಮೆ. ಯುರೇನಸ್‌ನ ಒಳಭಾಗದ ತಾಪಮಾನವು ಸುಮಾರು ೭೦೦೦K ನಷ್ಟಿದೆ. ಹೋಲಿಕೆಯಲ್ಲಿ, ಗುರುವು ೩೦,೦೦೦K ಮತ್ತು ಶನಿಯು ೧೮,೦೦೦K ತಾಪಮಾನವನ್ನು ಹೊಂದಿವೆ. ಯುರೇನಸ್‌ನ ವಾಯುಮಂಡಲದಲ್ಲಿ ಉಂಟಾಗುವ ಸಂವಹನ ಪ್ರವಾಹಗಳು ದುರ್ಬಲವಾಗಿರುವುದರಿಂದ, ಉಳಿದ ಅನಿಲರೂಪಿ ಗ್ರಹಗಳಲ್ಲಿ ಕಾಣುವಂತೆ, ಅದರ ವಾಯುಮಂಡಲದಲ್ಲಿ ಪಟ್ಟಿಗಳು ಕಾಣುವುದಿಲ್ಲ. ಆದರೆ, ಮೇಲೆ ಹೇಳಿದಂತೆ, ಯುರೇನಸ್‍ನ ಮೇಲೆ ಋತುಮಾನಗಳೊಂದಿಗೆ ಹವಾಮಾನದಲ್ಲಿ ಬದಲಾವಣೆಗಳುಂಟಾಗುತ್ತವೆ. ಈ ಬದಲಾವಣೆಗಳು ಅಯನಸಂಕ್ರಾಂತಿಗಿಂತ (solstice) ವಿಷುವತ್ಸಂಕ್ರಾಂತಿಯಲ್ಲಿ (equinox) ಹೆಚ್ಚು ಎದ್ದು ಕಾಣುತ್ತವೆ.
ಮೋಡಗಳ ವೈಶಿಷ್ಟ್ಯತೆಗಳು
[ಬದಲಾಯಿಸಿ]೨೦೦೪ರ ಶರತ್ಕಾಲದಲ್ಲಿ ಯುರೇನಸ್‌ನ ವಾಯುಮಂಡಲದಲ್ಲಿ ಹಲವಾರು ಮೋಡಗಳು ಗೋಚರಿಸಿ, ಅದಕ್ಕೆ ನೆಪ್ಚೂನ್ನಂತಹ ನೋಟವನ್ನು ಕೊಟ್ಟವು.[೪]
ಗ್ರಹದ ಉಂಗುರಗಳು
[ಬದಲಾಯಿಸಿ]ಯುರೇನಸ್ ಗ್ರಹವು ಮಂದವಾದ ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಈ ಉಂಗುರಗಳು ಹತ್ತು ಮೀ. ಗಳವರೆಗೂ ವ್ಯಾಸವುಳ್ಳ ತುಣುಕುಗಳಿಂದ ಕೂಡಿವೆ. ಜೇಮ್ಸ್ ಎಲಿಯಟ್, ಎಡ್ವರ್ಡ್ ದನ್ಹಮ್, ಮತ್ತು ಡಗ್ಲಸ್ ಮಿಂಕ್ ಅವರುಗಳು ೧೯೭೭ರಲ್ಲಿ ಕೈಪರ್ ವೀಕ್ಷಣಾಲಯವನ್ನು ಉಪಯೋಗಿಸುತ್ತಿದ್ದಾಗ ಆಕಸ್ಮಿಕವಾಗಿ ಉಂಗುರಗಳನ್ನು ಕಂಡುಹಿಡಿದರು. ಯುರೇನಸ್ ಗ್ರಹವು ಒಂದು ನಕ್ಷತ್ರವನ್ನು ಮರೆಮಾಡುವ] ಸಂದರ್ಭವನ್ನು ಬಳಸಿ ಗ್ರಹದ ವಾಯುಮಂಡಲವನ್ನು ಅಧ್ಯಯನ ಮಾಡುವ ಉದ್ದೇಶವನ್ನು ಇವರು ಹೊಂದಿದ್ದರು. ಅವರ ಅವಲೋಕಗಳನ್ನು ಪರಿಶೀಲಿಸಿದಾಗ ತಿಳಿದುಬಂದಿದ್ದೇನೆಂದರೆ, ನಕ್ಷತ್ರವು ಯುರೇನಸ್‌ನ ಹಿಂಬದಿಯಿಂದ ಪುನಃ ಮರುಕಳಿಸುವುದಕ್ಕೆ ಮುಂಚೆ, ಸ್ವಲ್ಪ ಸ್ವಲ್ಪವೇ ಕಾಲಾವಧಿಗಳಲ್ಲಿ ೫ ಬಾರಿ ಮರೆಯಾಗಿತ್ತು. ಇದರಿಂದ, ಗ್ರಹದ ಸುತ್ತ ಉಂಗುರ ವ್ಯವಸ್ಥೆಯು ಇರಬೇಕೆಂದು ತೀರ್ಮಾನಿಸಲಾಯಿತು; ವಾಯೇಜರ್ ೨ ೧೯೮೬ರಲ್ಲಿ ಯುರೇನಸ್ ನ ಬಳಿ ಹೋದಾಗ ಈ ಉಂಗುರಗಳನ್ನು ನೇರವಾಗಿ ಕಂಡುಹಿಡಿಯಲಾಯಿತು.
೨೦೦೫ರ ಹೊತ್ತಿಗೆ ೧೩ ಉಂಗುರಗಳನ್ನು ಗುರುತಿಸಲಾಗಿತ್ತು. ಡಿಸೆಂಬರ್ ೨೦೦೫ರಲ್ಲಿ ಹಬಲ್ ದೂರದರ್ಶಕವು ಮುಂಚೆ ಗೊತ್ತಿರದ ಎರಡು ಉಂಗುರಗಳ ಚಿತ್ರವನ್ನು ತೆಗೆಯಿತು. ಇವುಗಳಲ್ಲಿ ದೊಡ್ಡ ಉಂಗುರವು, ಮುಂಚೆ ತಿಳಿದಿದ್ದ ಉಂಗುರಗಳ ಎರಡರಷ್ಟು ವ್ಯಾಸವನ್ನು ಹೊಂದಿದೆ. ಈ ಹೊಸ ಉಂಗುರಗಳು ಗ್ರಹದಿಂದ ಎಷ್ಟು ದೂರವಿವೆಯೆಂದರೆ, ಇವನ್ನು ಯುರೇನಸ್‌ನ "ಎರಡನೇ ಉಂಗುರ ವ್ಯವಸ್ಥೆ"ಯೆಂದು ಕರೆಯಲಾಗುತ್ತಿದೆ. ಹಬಲ್ ದೂರದರ್ಶಕವು ಎರಡು ಸಣ್ಣ ಉಪಗ್ರಹಗಳನ್ನೂ ಕಂಡುಹಿಡಿಯಿತು. ಇವುಗಳಲ್ಲೊಂದು ಉಪಗ್ರಹವು ಹೊಸದಾಗಿ ಕಂಡುಹಿಡಿಯಲಾದ ಒಂದು ಉಂಗುರದ ಜೊತೆಯೇ ಯುರೇನಸ್‌ನ್ನು ಪರಿಭ್ರಮಿಸುತ್ತದೆ. ಯುರೇನಸ್‌ನ ಒಳ ಉಪಗ್ರಹಗಳ ಕಕ್ಷೆಗಳು ಕಳೆದ ದಶಕದಲ್ಲಿ ಗಮನಾರ್ಹವಾಗಿ ಬದಲಾಗಿವೆಯೆಂದು ಹೊಸ ಮಾಹಿತಿಯಿಂದ ತಿಳಿದುಬರುತ್ತದೆ.
ಹೊರ ಉಂಗುರಗಳಲ್ಲೊಂದು ವರ್ಣಪಟಲದಲ್ಲಿ ನೀಲಿಯಾಗಿಯೂ, ಮತ್ತೊಂದು ಕೆಂಪಾಗಿಯೂ ಕಾಣುತ್ತವೆಂಬ ಮಾಹಿತಿಯನ್ನು ಏಪ್ರಿಲ್ ೨೦೦೬ರಲ್ಲಿ ಪ್ರಕಾಶಿಸಲಾಯಿತು.[೫] ಗ್ರಹದ ಉಳಿದ ಉಂಗುರಗಳು ಊದಾ ಬಣ್ಣದಲ್ಲಿ ಕಾಣುತ್ತವೆ. ನೀಲಿ ಉಂಗುರವು ಒಂದು ಉಪಗ್ರಹದ ಹೊಡೆತಕ್ಕೆ ಸಿಕ್ಕಿ, ಅದರ ಗುರುತ್ವ ಬಲಕ್ಕೆ ತನ್ನ ಭಾರವಾದ ತುಣುಕುಗಳನ್ನು ಬಲಿಕೊಟ್ಟಿರಬಹುದೆಂದು ಈಗಿನ ಯೋಚನೆ. ಉಪಗ್ರಹದ ಗುರುತ್ವಕ್ಕೆ ಸೆರೆ ಬೀಳದೆ ಉಳಿದುಕೊಂಡ ನಯವಾದ ಕಣಗಳು ಬೆಳಕನ್ನು ವಕ್ರೀಭವಿಸಿ (ಭೂಮಿಯ ವಾಯುಮಂಡಲವು ಬೆಳಕನ್ನು ವಕ್ರೀಭವಿಸುವಂತೆ) ನೀಲಿ ಬಣ್ಣವನ್ನು ಉಂಟುಮಾಡುತ್ತವೆ ಎಂದು ಯೋಚಿಸಲಾಗಿದೆ.
ಅನ್ವೇಷಣೆ
[ಬದಲಾಯಿಸಿ]ಇದುವರೆಗೂ ಯುರೇನಸ್‌ನನ್ನು ತಲುಪಿದ ಏಕೈಕ ನೌಕೆಯೆಂದರೆ ನಾಸಾದ ವಾಯೇಜರ್ ೨. ಸಧ್ಯದಲ್ಲಿ ಯುರೇನಸ್‌ನತ್ತ ಹೋಗಲು ಬೇರಾವ ಯೋಜನೆಗಳೂ ಇಲ್ಲ. ೧೯೭೭ರಲ್ಲಿ ಉಡಾಯಿಸಲಾದ ವಾಯೇಜರ್ ೨ ನೌಕೆಯು ಜನವರಿ ೨೪, ೧೯೮೬ರಂದು ಗ್ರಹದ ಅತಿ ಹತ್ತಿರ ತಲುಪಿ, ನಂತರ ನೆಪ್ಚೂನ್ನತ್ತ ತನ್ನ ಯಾತ್ರೆಯನ್ನು ಮುಂದುವರೆಸಿತು.
ನೈಸರ್ಗಿಕ ಉಪಗ್ರಹಗಳು
[ಬದಲಾಯಿಸಿ]ಯುರೇನಸ್ ಗೊತ್ತಿರುವಂತೆ ೨೭ ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಷೇಕ್ಸ್ಪಿಯರ್ ಮತ್ತು ಅಲೆಕ್ಸಾಂಡರ್ ಪೋಪ್ರ ಸಾಹಿತ್ಯಗಳಲ್ಲಿ ಕಂಡುಬರುವ ಪಾತ್ರಗಳ ಹೆಸರುಗಳನ್ನು ಈ ಉಪಗ್ರಹಗಳಿಗೆ ಇಡಲಾಗಿದೆ. ಯುರೇನಸ್ ನ ೫ ಮುಖ್ಯ ಉಪಗ್ರಹಗಳು: ಮಿರಾನ್ಡ, ಏರಿಯಲ್, ಅಂಬ್ರಿಯೆಲ್, ಟೈಟೇನಿಯ ಮತ್ತು ಓಬೆರಾನ್.
ಹೆಸರು |
ವ್ಯಾಸ (ಕಿ.ಮೀ.) |
ದ್ರವ್ಯರಾಶಿ (ಕಿ.ಗ್ರಾಂ.) |
ಕಕ್ಷೆಯ ತ್ರಿಜ್ಯ (ಕಿ.ಮೀ.) |
ಕಕ್ಷೀಯ ಪರಿಭ್ರಮಣ ಕಾಲ (ದಿನ) |
---|---|---|---|---|
ಮಿರಾಂಡ | ೪೭೦ (೧೪%) |
೭.೦×೧೦೧೯ (೦.೧%) |
೧೨೯,೦೦೦ (೩೫%) |
೧.೪ (೫%) |
ಏರಿಯಲ್ | ೧೧೬೦ (೩೩%) |
೧೪×೧೦೨೦ (೧.೮%) |
೧೯೧,೦೦೦ (೫೦%) |
೨.೫ (೧೦%) |
ಅಂಬ್ರಿಯೆಲ್ | ೧೧೭೦ (೩೪%) |
೧೨×೧೦೨೦ (೧.೬%) |
೨೬೬,೦೦೦ (೭೦%) |
೪.೧ (೧೫%) |
ಟೈಟೇನಿಯ | ೧೫೮೦ (೪೫%) |
೩೫×೧೦೨೦ (೪.೮%) |
೪೩೬,೦೦೦ (೧೧೫%) |
೮.೭ (೩೦%) |
ಓಬೆರಾನ್ | ೧೫೨೦ (೪೪%) |
೩೦×೧೦೨೦ (೪.೧%) |
೫೮೪,೦೦೦ (೧೫೦%) |
೧೩.೫ (೫೦%) |
- ಇವುಗಳ ಆವಿಷ್ಕಾರಗಳ ಸಮಯಗಳಿಗೆ, ಸೌರಮಂಡಲದ ಗ್ರಹ/ಉಪಗ್ರಹಗಳ ಆವಿಷ್ಕಾರದ ಸಮಯಗಳು ಲೇಖನವನ್ನು ನೋಡಿ
ಗೋಚರತೆ
[ಬದಲಾಯಿಸಿ]ಯುರೇನಸ್ ನ ಗೋಚರ ಪ್ರಮಾಣವು +೫.೫ ರಿಂದ +೬.೦ ವರೆಗೆ ಇರುವುದರಿಂದ, ಚೆನ್ನಾಗಿ ಕತ್ತಲಿರುವ ಆಗಸದಲ್ಲಿ ಬರಿಗಣ್ಣಿಗೆ ಮಂದವಾದ ನಕ್ಷತ್ರದಂತೆ ಕಾಣಿಸುತ್ತದೆ. ಇದರ ಗೋಚರ ತುಂಬಾ ಕಷ್ಟ. ದುರ್ಬೀನಿನ ಸಹಾಯದಿಂದ ಸುಲಭವಾಗಿ ನೋಡಬಹುದು. ಭೂಮಿಯಿಂದ ನೋಡಿದಾಗ, ೪ ಆರ್ಕ್-ಕ್ಷಣಗಳ ವ್ಯಾಸವಿರುವಂತೆ ಕಂಡುಬರುತ್ತದೆ. ೧೨ ಅಂಗುಲಕ್ಕಿಂತ (೨೦ ಸೆಂ.ಮೀ.) ಹೆಚ್ಚು ವ್ಯಾಸದ ವಸ್ತು ಕಾಚಕವನ್ನು ಹೊಂದಿರುವ ಹವ್ಯಾಸಿ ದೂರದರ್ಶಕದಲ್ಲಿ, ಗ್ರಹವು ಬಿಳಿಚಿಕೊಂಡ ನೀಲಿ ತಟ್ಟೆಯಂತೆ ಕಾಣುತ್ತದೆ. ಇದರ ಎರಡು ದೊಡ್ಡ ಉಪಗ್ರಹಗಳಾದ ಟೈಟೇನಿಯ ಮತ್ತು ಓಬೆರಾನ್ಗಳೂ ಕಾಣಬಹುದು. ಇದಕ್ಕಿಂತ ದೊಡ್ಡ ದೂರದರ್ಶಕಗಳಲ್ಲೂ ಮೇಲ್ಮೈ ವಿವರಗಳು ಕಾಣುವುದಿಲ್ಲ. ಆದರೆ, ವಾಯೇಜರ್ ಯಾತ್ರೆಯ ನಂತರದ ವರ್ಷಗಳಲ್ಲಿ ನಸುಗೆಂಪು (infrared) ಕಿರಣಾಧ್ಯಯನಗಳು ವಾಯುಮಂಡಲದ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಂದುಕೊಟ್ಟಿವೆ.[೬]
- ಹೆಚ್ಚಿನ ವಿವರಗಳಿಗಾಗಿ, ಯುರೇನಸ್ ನ ಸನ್ನಿವೇಶಗಳು ಲೇಖನವನ್ನು ನೋಡಿ.
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ M. Arago (1871), Herschel, Annual Report of the Board of Regents of the Smithsonian Institution, pp. 198-223
- ↑ https://www.eternalsailormoon.org/help.html#myth Archived 2019-10-04 ವೇಬ್ಯಾಕ್ ಮೆಷಿನ್ ನಲ್ಲಿ. Sailormoon Terms and Information
- ↑ Lunine J. I. (1993). "The Atmospheres of Uranus and Neptune". Annual Review of Astronomy and Astrophysics. 31: 217–263. doi:10.1146/annurev.aa.31.090193.001245. ISSN 0066-4146.
- ↑ "ಯುರೇನಸ್ ನ ವಿಚಿತ್ರ ಹವಾಮಾನವನ್ನು ಪರಿಶೀಲಿಸಿದ ಕೆಕ್". Archived from the original on 2006-12-09. Retrieved 2007-01-05.
- ↑ "Blue ring discovered around Uranus" (Press release). UC Berkeley News. 2006-04-06. Retrieved 2006-10-03.
{{cite press release}}
: Check date values in:|date=
(help) - ↑ New Images Reveal Clouds on Planet Uranus
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Find more about Uranus at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- NASA's Uranus fact sheet
- Keck pictures of Uranus show best view from the ground - Press release with some photographs showing rings, satellites and clouds
- News reports of 22 December 2005 rings and moons discovery
- Planets - Uranus A kid's guide to Uranus.
- Uranus at Jet Propulsion Laboratory's planetary photojournal.
- Spring Has Sprung on Uranus Archived 2009-01-06 ವೇಬ್ಯಾಕ್ ಮೆಷಿನ್ ನಲ್ಲಿ.
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |