ಡಿಯರ್ಬಾರ್ನ್, ಮಿಷಿಗನ್
ಡಿಯರ್ಬಾರ್ನ್ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿಷಿಗನ್ ರಾಜ್ಯದಲ್ಲಿ ವೇನ್ ಕೌಂಟಿಯಲ್ಲಿರುವ ಒಂದು ನಗರ. ಡಿಟ್ರಾಯಿಟ್‍ನ ನೈಋತ್ಯದಲ್ಲಿ ಅದಕ್ಕೆ ಹೊಂದಿಕೊಂಡಂತೆ ಇದೆ. ರೂಷ್ ನದಿ ಇದರ ನಡುವೆ ಹರಿಯುತ್ತದೆ. ನಗರದ ಜನಸಂಖ್ಯೆ 1,04,199 (1970).
ಇತಿಹಾಸ
[ಬದಲಾಯಿಸಿ]1812ರ ಯುದ್ಧದ ಅನಂತರ ಈ ಪ್ರದೇಶದಲ್ಲಿ ಜನವಸತಿ ಆರಂಭವಾಯಿತು. ಇಲ್ಲಿ ಪೆಕಿನ್, ಗ್ರೀನ್‍ಫೀಲ್ಡ್, ಸ್ಟ್ರಿಂಗ್‍ವೆಲ್ಸ್ ವಸತಿಗಳು ಎದ್ದುವು. ಈ ಮೂರು ವಸತಿಗಳ ಪ್ರದೇಶಗಳು ಭಾಗಶಃ ಈಗ ಡಿಯರ್‍ಬಾರ್ನ್‍ನಲ್ಲಿ ಅಡಕವಾಗಿದೆ. ಜನರಲ್ ಹೆನ್ರಿ ಡಿಯರ್‍ಬಾರ್ನನ ಗೌರವಾರ್ಥವಾಗಿ ಈ ಸ್ಥಳದ ಹೆಸರು ಡಿಯರ್‍ಬಾರ್ನ್ ಎಂದಾಯಿತು. 1893ರಲ್ಲಿ ಡಿಯರ್‍ಬಾರ್ನ್ ಗ್ರಾಮಕ್ಕೆ ಪಟ್ಟಣದ ಸ್ಥಾನ ಬಂತು. 1830ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ತೋಫ್‍ಖಾನೆಯನ್ನು ಇಲ್ಲಿ ಸ್ಥಾಪಿಸಿದಾಗಿನಿಂದ ಈ ಸ್ಥಳ ಬೆಳೆಯತೊಡಗಿತು. ತೋಫ್‍ಖಾನೆಯನ್ನು 1875ರಲ್ಲಿ ತೆಗೆದುಹಾಕಲಾಯಿತು. ಒಂದನೆಯ ಮಹಾಯುದ್ಧದ ಅನಂತರ ಇಲ್ಲಿ ಮೋಟಾರು ಯಂತ್ರಸ್ಥಾವರ ನಿರ್ಮಾಣವಾಯಿತು. ಹಿಂದೆ ಸ್ಟ್ರಿಂಗ್‍ವೆಲ್ಸ್ ಎನಿಸಿಕೊಂಡಿದ್ದು ಆಮೇಲೆ ಪೋಡ್ರ್ಸ್‍ನ್ ಎಂಬ ಹೆಸರು ಪಡೆದಿದ್ದ ನಗರವನ್ನು 1928ರಲ್ಲಿ ಇದರಲ್ಲಿ ಸೇರಿಸಲಾಯಿತು. ಎರಡನೆಯ ಮಹಾಯುದ್ಧದ ಅನಂತರ ಇಲ್ಲಿ ಕೈಗಾರಿಕೆಗಳು ವಿಶೇಷವಾಗಿ ಬೆಳೆದಿವೆ. ನಗರವೂ ತುಂಬ ವಿಸ್ತರಿಸಿದೆ. ಇಲ್ಲಿ ಮೋಟಾರು, ಯಂತ್ರ, ಬಣ್ಣಗಳು, ಇಟ್ಟಿಗೆಗಳು ಮುಂತಾದ ಹಲವು ಕೈಗಾರಿಕೆಗಳಿವೆ. ಇದೊಂದು ವಾಣಿಜ್ಯ ಕೇಂದ್ರ. ಹಲವು ರೈಲುಮಾರ್ಗಗಳು ಇಲ್ಲಿ ಸಂಧಿಸುತ್ತವೆ. ಇಲ್ಲಿ ಉತ್ತಮವಾದ ಶಿಕ್ಷಣ ವ್ಯವಸ್ಥೆಯುಂಟು. ಹೆನ್ರಿ ಫೋರ್ಡ್ ಕಮ್ಯುನಿಟಿ ಕಾಲೇಜ್ ಒಂದು ಮುಖ್ಯ ಶಿಕ್ಷಣ ಸಂಸ್ಥೆ.
ಪ್ರವಾಸೀ ಆಕರ್ಷಣೆಗಳು
[ಬದಲಾಯಿಸಿ]ಈ ಪಟ್ಟಣದಲ್ಲಿ ಅನೇಕ ಉದ್ಯಾನಗಳೂ ಕ್ರೀಡಾಂಗಣಗಳೂ ಇವೆ. ಅಲ್ಲದೆ ಸುಮಾರು 35ಮೈ. ದೂರದಲ್ಲಿ, 626 ಎಕರೆ ವಿಸ್ತೀರ್ಣವುಳ್ಳ ಕ್ಯಾಂಪ್ ಡಿಯರ್‍ಬಾರ್ನ್ ಒಂದು ಮನೋರಂಜನೆಯ ಸ್ಥಳ. ಫೋರ್ಡ್ ಮೋಟಾರು ಕಂಪನಿಯ ಖಾಯಂ ಕೈಗಾರಿಕಾ ಪ್ರದರ್ಶನ, ಹೆನ್ರಿ ಫೋರ್ಡ್ ವಸ್ತುಸಂಗ್ರಹಾಲಯವನ್ನೊಳಗೊಂಡ ಎಡಿಸನ್ ಇನ್ಸ್‍ಟಿಟ್ಯೂಟ್, ಜೊಷುವಾ ಹೊವಾರ್ಡ್ ನಿರ್ಮಿಸಿರುವ ಹೇಗ್ ಹೌಸ್, ಹಳೆಯ ತೋಫ್‍ಖಾನೆಯ ಅವಶೇಷಗಳು, ಗ್ರೀನ್‍ಫೀಲ್ಡ್ ಗ್ರಾಮ ಮತ್ತು ಅಲ್ಲಿನ ಹಸಿರು ಹುಲ್ಲಿನ ಸುತ್ತ ನಿರ್ಮಿಸಿರುವ ಐತಿಹಾಸಿಕ ಕಟ್ಟಡಗಳು, ಮೆನಲೋ ಉದ್ಯಾನಗಳು-ಇವು ಕೆಲವು ಪ್ರವಾಸಿ ಆಕರ್ಷಣೆಗಳು.